Vignyana Kathegalu
ಉತ್ತರ ಧ್ರುವದಲ್ಲಿ ಕೈಗೊಂಡ ರೇಡಿಯೋ ಖಗೋಳಶಾಸ್ತ್ರ ಪ್ರಯೋಗದ ರೋಚಕ ಅನುಭವಗಳು - Exciting experiences during a radio astronomy experiment near the North Pole
Speaker: B S Girish (EEG, RRI)
ನಾರ್ವೆಯ, ಉತ್ತರ ಧ್ರುವದ ಸಮೀಪ ಪ್ರದೇಶವಾದ ಸ್ವಾಲ್ಬಾರ್ಡ್ನಲ್ಲಿ (Svalbard) ಭಾರತದ ಕಾಯಂ ಸಂಶೋಧನಾ ಕೇಂದ್ರ, ಹಿಮಾದ್ರಿ, 2008ರಿಂದ ಕಾರ್ಯನಿರ್ವಹಿಸುತ್ತಿದೆ. ಹಿಮಾದ್ರಿಯಲ್ಲಿ ನಡೆಯುವ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳನ್ನು ಭಾರತದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR) ಸಮನ್ವಯಗೊಳಿಸುತ್ತದೆ. ಸಾಮಾನ್ಯವಾಗಿ, ಆರ್ಕ್ಟಿಕ್‌ನಲ್ಲಿ ಅಕ್ಟೋಬರ್ ಅಂತ್ಯಕ್ಕೆ ಸೂರ್ಯಾಸ್ತವಾದರೆ, ಸೂರ್ಯನ ರಶ್ಮಿಗಳು ಮತ್ತೆ ಕಾಣಿಸುವುದು ಫೆಬ್ರವರಿ ತಿಂಗಳ ಮಧ್ಯದಲ್ಲಿ. ಅಂದರೆ, ಸುಮಾರು ನಾಲ್ಕು ತಿಂಗಳು ಆರ್ಕ್ಟಿಕ್‌ನಲ್ಲಿ ಕತ್ತಲು ಆವರಿಸಿರುತ್ತದೆ (ಗಾಢ ಚಳಿಗಾಲ). ಇತ್ತೀಚಿನವರೆಗೂ, ಬೇಸಿಗೆಕಾಲದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಹಿಮಾದ್ರಿಗೆ, ಕಳೆದ ಚಳಿಗಾಲದಲ್ಲಿ (ಡಿಸೆಂಬರ್ 2023) ಪ್ರಪ್ರಥಮ ಬಾರಿಗೆ ಸಂಶೋಧನಾ ಯಾತ್ರೆಗೆಂದು ನಾಲ್ಕು-ಸದಸ್ಯರ ತಂಡವೊಂದನ್ನು NCPOR ಕಳುಹಿಸಿತ್ತು. ರಾಮನ್ ಸಂಶೋಧನಾ ಸಂಸ್ಥೆಯ (RRI) ನೇತೃತ್ವದಲ್ಲಿ ತೆರಳಿದ ಈ ತಂಡದ ಪ್ರಮುಖ ಉದ್ದೇಶಗಳೆಂದರೆ: ಖಗೋಳ ವಿಜ್ಞಾನ, ಅರ್ಕ್ಟಿಕ್ ನಲ್ಲಿ ಆಗುತ್ತಿರುವ ವಾಯುಗುಣ ಬದಲಾವಣೆ, ಮತ್ತು ವಾತಾವರಣ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸುವುದು. ಸರಸ್ (SARAS), ರಾಮನ್ ಸಂಶೋಧನಾ ಸಂಸ್ಥೆಯ ಪ್ರಗತಿಯಲ್ಲಿರುವ ರೇಡಿಯೋ ಖಗೋಳಶಾಸ್ತ್ರದ ಪ್ರಯೋಗ, ಈ ವಿಶೇಷ ಕಾರ್ಯಯಾತ್ರೆಯ ಒಂದು ಮುಖ್ಯ ಭಾಗವಾಗಿತ್ತು. ಸರಸ್ ಪ್ರಯೋಗದ ಪ್ರಮುಖ ಉದ್ದೇಶ - ವಿಶ್ವದ ಮುಂಜಾನೆಯಲ್ಲಿ ಮಿನುಗಿದ ಮೊದಲ ನಕ್ಷತ್ರಗಳ ಪರಿಸರದಿಂದ ಹೊರಹೊಮ್ಮಿದ ಮಸುಕಾದ ರೇಡಿಯೋ ಸಂಕೇತಗಳ (Signals) ಪತ್ತೆ ಹಚ್ಚುವಿಕೆ. ಆದರೆ, ನಮ್ಮ ಆಕಾಶಗಂಗೆ ಹೊರಸೂಸುವ ಪ್ರಬಲ ರೇಡಿಯೋ ತರಂಗಗಳು, ತೀವ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣ ಹಾಗು ತಂತ್ರಜ್ಞಾನದ ಮುನ್ನಡೆಯಿಂದ ಮಾನವ ನಿರ್ಮಿತ ಸಾಧನಗಳಿಂದ ಹೊರಹೊಮ್ಮುವ ರೇಡಿಯೋ ತರಂಗಗಳ ಹಸ್ತಕ್ಷೇಪವು (Terrestrial Radio Frequency Intereference), ಈ ಮಸುಕಾದ ರೇಡಿಯೋ ಸಂಕೇತಗಳನ್ನು ಪತ್ತೆಹಚ್ಚುವ ನಮ್ಮ ಪ್ರಯತ್ನಕ್ಕೆ ಒಂದು ದೊಡ್ಡ ಸವಾಲನ್ನು ಎಸಗಿದೆ. ಈ ನಿಟ್ಟಿನಲ್ಲಿ ದೂರದ ಸ್ವಾಲ್ಬಾರ್ಡ್ನಯಿನ ಧ್ರುವ ರಾತ್ರಿಯಲ್ಲಿ (Polar Night) ಕೈಗೊಂಡ ಖಗೋಳ ವೀಕ್ಶಣೆಗೆ ಮಾನವ ನಿರ್ಮಿತ ಸಾಧನಗಳ ಹಸ್ತಕ್ಷೇಪದ (RFI) ಒಂದು ಸಮೀಕ್ಷೆಯ ಸಮಯದಲ್ಲಿ ನನಗಾದ ರೋಚಕ ಅನುಭವವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.